ಇತ್ತೀಚಿನ ಐಫೋನ್‌ಗಳಲ್ಲಿ ಹಲವು ಹೊಸ ಸೌಲಭ್ಯಗಳು ಸೇರ್ಪಡೆಯಾಗುತ್ತಲೇ ಇವೆ. ಆದರೆ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವ ಬಹಳಷ್ಟು ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಐಫೋನ್‌ಗೆ ಇನ್ನೂ ಸಾಧ್ಯವಾಗಿಲ್ಲ ಎನ್ನುವುದಂತೂ ಸತ್ಯ. 2026ರ ಆಗಸ್ಟ್‌ವರೆಗೆ ಬಿಡುಗಡೆಯಾದ ದುಬಾರಿ ಬೆಲೆ ಐಫೋನ್‌ಗಳಲ್ಲೂ ಇಲ್ಲದ ಸೌಲಭ್ಯಗಳು ಆಂಡ್ರಾಯ್ಡ್‌ನಲ್ಲಿದೆ ಎಂಬುದು ಪ್ರತಿಯೊಬ್ಬ ಆಂಡ್ರಾಯ್ಡ್ ಬಳಕೆದಾರರೂ ಹೆಮ್ಮೆ ಪಡಬೇಕಾದ ಸಂಗತಿ.
ಸ್ಪ್ಲಿಟ್ ಸ್ಕ್ರೀನ್:
ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಹುತೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ
ಸ್ಪ್ಲಿಟ್ ಸ್ಕ್ರೀನ್ ಸೌಲಭ್ಯವಿದೆ. ಅಂದರೆ, ಫೋನಿನ ಪರದೆಯನ್ನು ವಿಭಜಿಸಿ, ಒಂದೇ ಸಮಯದಲ್ಲಿ ಎರಡು
ಆ್ಯಪ್‌ಗಳನ್ನು ನೋಡಬಹುದು. ಪರದೆಯ ಮೇಲ್ಬಾಗದಲ್ಲೊಂದು, ಕೆಳಭಾಗದಲ್ಲೊಂದು ಆಂಡ್ರಾಯ್ಡ್‌ನಲ್ಲಿ ಬಳಸಬಹುದು. ಉದಾಹರಣೆ. ವಾಟ್ಸಪ್ ಬಳಸುತ್ತಲೇ
ಫೇಸ್‌ಬುಕ್ ನೋಡುವುದು ಸಾಧ್ಯವಾಗುತ್ತದೆ. ಇದು 2026ರವರಗಿನ ಯಾವುದೇ ಐಫೋನ್‌ನಲ್ಲಿ ಈವರೆಗೂ ಲಭ್ಯವಿಲ್ಲ.
ಪ್ಲೇ ಸ್ಟೋರ್‌ನಲ್ಲಿಲ್ಲದ ಆ್ಯಪ್‌ಗಳ ಬಳಕೆ:
ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆಂಡ್ರಾಯ್ಡ್ ಫೋನುಗಳಲ್ಲಿ ಪ್ಲೇ ಸ್ಟೋರ್ ಹಾಗೂ ಐಫೋನ್‌ನಲ್ಲಿ
ಆ್ಯಪ್ ಸ್ಟೋರ್ ಇರುತ್ತದೆ. ಪ್ಲೇ ಸ್ಟೋರ್‌ನಲ್ಲಿ ಇಲ್ಲದ ಆ್ಯಪ್‌ಗಳನ್ನು ಕೂಡ ಡೌನ್‌ಲೋಡ್ ಹಾಗೂ ಇನ್‌ಸ್ಟಾಲ್ ಮಾಡಿಕೊಳ್ಳಲು
ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಾಧ್ಯವಾಗುತ್ತದೆ. ಇದರಿಂದಾಗಿ ಸಾಕಷ್ಟು ಆ್ಯಪ್‌ಗಳನ್ನು, ಅದರಲ್ಲೂ ವಿಶೇಷವಾಗಿ
ಸಾರ್ವಜನಿಕವಲ್ಲದ ಆ್ಯಪ್‌ಗಳನ್ನು ಕೂಡ ಬಳಸಲು ಸಾಧ್ಯವಾಗುತ್ತದೆ. ಆದರೆ ಐಫೋನ್‌ನಲ್ಲಿ
ಹಾಗಲ್ಲ. ಸಾಮಾನ್ಯ ಬಳಕೆದಾರರು ಐಫೋನ್‌ನಲ್ಲಿ ಒಂದು ಆ್ಯಪ್ ಡೌನ್‌ಲೋಡ್
ಹಾಗೂ ಇನ್‌ಸ್ಟಾಲ್ ಮಾಡಬೇಕೆಂದರೆ ಅದು ಆ್ಯಪ್ ಸ್ಟೋರ್‌ನಲ್ಲಿ ಇರಲೇಬೇಕು. ಬೇರೆಡೆಯಿಂದ ಡೌನ್‌ಲೋಡ್ ಮಾಡಿದ
ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು
ಸಾಮಾನ್ಯ ಬಳಕೆದಾರರಿಗೆ ಐಫೋನ್‌ನಲ್ಲಿ ಸಾಧ್ಯವಾಗುವುದಿಲ್ಲ.
ಡ್ಯುಯಲ್ ಆ್ಯಪ್:
ಬಹತೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ ಡ್ಯುಯಲ್ ಆ್ಯಪ್ ಸೌಲಭ್ಯವಿರುತ್ತದೆ.
ಇದರಿಂದಾಗಿ ಒಂದೇ ಆ್ಯಪ್‌ನ್ನು ಎರಡಾಗಿ ಪರಿವರ್ತಿಸಿಕೊಂಡು ಬಳಸಬಹುದು. ಅಂದರೆ, ಫೋನ್‌ನಲ್ಲಿ
ಎರಡು ವಾಟ್ಸಪ್ ಆ್ಯಪ್, ಎರಡು ಫೇಸ್‌ಬುಕ್ ಆ್ಯಪ್ ಇತ್ಯಾದಿಗಳನ್ನು ಬಳಸಬಹುದು. ಇದು ಕೂಡ ಸಾಕಷ್ಟು
ರೀತಿಯಲ್ಲಿ ಉಪಯೋಗವಾಗಲಿದೆ. ಉದಾಹರಣೆ, ನಿಮ್ಮ ಬಳಿ ಎರಡು ಸಿಮ್ ಇದ್ದು, ಎರಡು ವಾಟ್ಸಪ್ ಅಕೌಂಟ್
ಬಳಸಬೇಕೆಂದಿದ್ದರೆ, ಆಗ ಇದು ನೆರವಾಗಲಿದೆ. ಅಥವಾ ನಿಮ್ಮ ಕುಟುಂಬ ಸದಸ್ಯರ ಬಳಿ ಬೇಸಿಕ್ ಫೋನ್ ಇದ್ದು,
ಅವರು ಕೆಲವು ಆ್ಯಪ್‌ಗಳನ್ನು ಬಳಸಲು ನಿಮ್ಮ ಫೋನ್ ಮೇಲೆ ಅವಲಂಬಿತರಾಗಿದ್ದರೆ, ಆಗ
ಇದು ನೆರವಾಗಲಿದೆ. ಆದರೆ ಐಫೋನ್‌ನ ಈವರೆಗಿನ ಯಾವುದೇ ಆವೃತ್ತಿಯಲ್ಲೂ ಈ ಸೌಲಭ್ಯವಿಲ್ಲ. ಈಗಿನ ಎಲ್ಲ
ಐಫೋನ್‌ಗಳಲ್ಲಿ ಒಂದೇ ಆ್ಯಪ್‌ನ್ನು ಒಟ್ಟಿಗೆ ಎರಡು ಬಾರಿ ಇನ್‌ಸ್ಟಾಲ್ ಮಾಡಲು ಸಾಧ್ಯವಿಲ್ಲ.
ಮೆಮೊರಿ ಕಾರ್ಡ್:
ಹಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಮೆಮೊರಿ ಕಾರ್ಡ್
ಹಾಕಲು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಇರುತ್ತದೆ. ಇಲ್ಲಿ ಮೆಮೊರಿ ಕಾರ್ಡ್ ಹಾಕಿ, ಫೋನಿನ
ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಫೋಟೋ, ವೀಡಿಯೋ, ಸಂಗೀತ ಮತ್ತು ಇತರ ಫೈಲ್‌ಗಳನ್ನು ಹೆಚ್ಚು
ಉಳಿಸಬಹುದು. ಒಂದುವೇಳೆ ಆ ಮೆಮೊರಿ ಕಾರ್ಡ್ ಭರ್ತಿಯಾದರೆ,
ಮತ್ತೊಂದು ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದು. ಆದರೆ ಈವರೆಗಿನ ಯಾವುದೇ ಐಫೋನ್‌ನಲ್ಲಿ ಈ
ಸೌಲಭ್ಯವಿಲ್ಲ. ಐಫೋನ್ ಖರೀದಿಸುವಾದ ಎಷ್ಟು ಸ್ಟೋರೇಜ್ ಇರುತ್ತದೆಯೋ, ಅಷ್ಟು ಮಾತ್ರ
ಶಾಶ್ವತವಾದ ಇಂಟರ್ನಲ್ ಸ್ಟೋರೇಜ್ ಆಗಿರುತ್ತದೆ. ಅದಕ್ಕಿಂತ ಹೆಚ್ಚಿನ ಸ್ಟೋರೇಜ್ ಬೇಕೆಂದರೆ,
ಕ್ಲೌಡ್ ಸ್ಟೋರೇಜ್ ಬಳಸಬೇಕಾಗುತ್ತದೆ. ಮೆಮೊರಿ ಕಾರ್ಡ್ ಹಾಕುವ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು
ಹೆಚ್ಚಿಸುವುದು ಐಫೋನ್‌ನಲ್ಲಿ ಸಾಧ್ಯವಾಗುವುದಿಲ್ಲ.
ಇಷ್ಟೇ ಅಲ್ಲದೇ ಇನ್ನೂ ಅನೇಕ
ರೀತಿಯಲ್ಲಿ ಆಂಡ್ರಾಯ್ಡ್ ಫೋನ್‌ಗಳೇ ಐಫೋನ್‌ಗಳಿಗಿಂತ ಉತ್ತಮ. ಬಹುತೇಕ ಆಂಡ್ರಾಯ್ಡ್
ಫೋನ್‌ಗಳು ಐಫೋನ್‌ಗಿಂತ ಅಗ್ಗವಾಗಿವೆ. ನೀವು ಕಡಿಮೆ ಹಣದಲ್ಲಿಯೇ ಒಳ್ಳೆಯ ಗುಣಮಟ್ಟದ ಫೋನ್ ಖರೀದಿಸಬಹುದು. ಐಫೋನ್‌ಗಳು ಸಾಮಾನ್ಯವಾಗಿ ಹೆಚ್ಚು
ದುಬಾರಿಯಾಗಿರುತ್ತವೆ. ಅನೇಕ ಕಂಪನಿಗಳು ಆಂಡ್ರಾಯ್ಡ್ ಫೋನ್ ಉತ್ಪಾದನೆ ಮಾಡುತ್ತವೆ. ಸ್ಯಾಮ್‌ಸಂಗ್, ಝಿಯೋಮಿ, ರಿಯಲ್‌ಮಿ,
ವೈವೋ, ಒಪ್ಪೋ ಸೇರಿದಂತೆ ಅನೇಕ ಕಂಪನಿಗಳು ವಿವಿಧ ಮಾದರಿಯ ಫೋನ್‌ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ
ಮಾಡುತ್ತವೆ. ನಮಗೆ ಬೇಕಾದ ಬೆಲೆ, ಗಾತ್ರ, ಕ್ಯಾಮೆರಾ ಮತ್ತು ಬ್ಯಾಟರಿ ಆಯ್ಕೆ ಮಾಡಿಕೊಳ್ಳಲು ಆಂಡ್ರಾಯ್ಡ್‌ನಲ್ಲಿ
ಹೆಚ್ಚಿನ ಆಯ್ಕೆಗಳಿರುತ್ತವೆ. ಫೋನನ್ನು ರೂಟ್ ಮಾಡಿ
ಹೆಚ್ಚು ನಿಯಂತ್ರಣ ಪಡೆಯುವುದು ಕೂಡ ಆಂಡ್ರಾಯ್ಡ್‌ನಲ್ಲಿ ಸಾಧ್ಯವಿದೆ. ರೂಟ್ ಮಾಡುವ
ಅವಕಾಶವು ಬಹುತೇಕ ಬಳಕೆದಾರರಿಗೆ ಅನಗತ್ಯವಾಗಿದ್ದರೂ, ಐಫೋನ್‌ನಲ್ಲಿ ಸಾಧ್ಯವಾಗುವುದಿಲ್ಲ
ಎನ್ನುವುದಂತೂ ಸತ್ಯ.
ಇದಕ್ಕೆ ವಿರುದ್ಧವಾಗಿ, ಆಂಡ್ರಾಯ್ಡ್‌ನಲ್ಲಿ
ಇಲ್ಲದ ಅನೇಕ ಸೌಲಭ್ಯಗಳು ಐಫೋನ್‌ನಲ್ಲಿವೆ. ಆದ್ದರಿಂದಲೇ ದುಬಾರಿ ಬೆಲೆ ತೆತ್ತು ಜನರು ಐಫೋನ್ ಖರೀದಿಸುತ್ತಾರೆ.
ಹಾಗಾದರೆ, ಐಫೋನ್‌ನಲ್ಲಿ ಇರುವ ಆ ವಿಶೇಷ ಸೌಲಭ್ಯಗಳು ಯಾವುವು? ಆ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯೋಣ.