1. ಆಹಾರ ಸೇವನೆ ನಂತರ ಕಡ್ಡಾಯ ವ್ಯಾಯಾಮ:
ಹೊಟ್ಟೆ ಖಾಲಿಯಿದ್ದಾಗ ವಾಕಿಂಗ್ ಅಥವಾ ವ್ಯಾಯಾಮ ಮಾಡುವುದು ತುಂಬಾನೇ ಸುಲಭ. ಡಯಾಬಿಟೀಸ್
ನಿಯಂತ್ರಣಕ್ಕೂ ಅದೇ ಒಳ್ಳೆಯದೆಂದು ಬಹಳಷ್ಟು ಜನರು ತಪ್ಪಾಗಿ ಭಾವಿಸಿದ್ದಾರೆ. ಆದರೆ ಖಾಲಿ ಹೊಟ್ಟೆಯಲ್ಲಿ
ವಾಕಿಂಗ್-ವ್ಯಾಯಾಮ ಮಾಡುವುದಕ್ಕಿಂತ ಆಹಾರ ಸೇವನೆಯ ನಂತರ ವಾಕಿಂಗ್-ವ್ಯಾಯಾಮ ಮಾಡುವುದು ಉತ್ತಮ.
ಆಹಾರ ಸೇವನೆಯಿಂದಾಗಿ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ವಾಕಿಂಗ್
ಅಥವಾ ವ್ಯಾಯಾಮ ಮಾಡುವುದರಿಂದ ಮಾಂಸಖಂಡಗಳು ಗ್ಲೂಕೋಸ್ ಹೀರಿಕೊಳ್ಳುತ್ತದೆ. ಇದರಿಂದಾಗಿ ರಕ್ತವು
ಶೀಘ್ರವೇ ಸಹಜ ಸ್ಥಿತಿಗೆ ಮರಳುತ್ತದೆ.
2. ಪ್ರತಿ ಊಟದಲ್ಲಿ ಹೆಚ್ಚಿನ ಪ್ರೋಟೀನ್:
ಡಯಾಬಿಟಿಸ್ ಇರುವವರು ಬೆಳಗಿನ ಉಪಾಹಾರದಿಂದ ರಾತ್ರಿಯ ಊಟದ ತನಕ ತಿನ್ನುವ ಪ್ರತಿಯೊಂದು ಆಹಾರದಲ್ಲಿ
ಹೆಚ್ಚಿನ ಪ್ರೋಟೀನ್ ಇರಲೇಬೇಕು. ಆಹಾರ ವೇಗವಾಗಿ ಜೀರ್ಣವಾಗುವುದನ್ನು ಪ್ರೋಟೀನ್ ತಡೆಯುತ್ತದೆ.
ಹೆಚ್ಚು ಪ್ರೋಟೀನ್ ಇರುವ ಆಹಾರವು ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತದ ಗ್ಲೂಕೋಸ್ ಪ್ರಮಾಣವು
ಒಮ್ಮೆಲೆ ಜಾಸ್ತಿಯಾಗುವುದಕ್ಕೆ ಕಡಿವಾಣ ಬೀಳುತ್ತದೆ. ದೇಹದ ಸ್ನಾಯುಗಳಿಗೆ ಹೆಚ್ಚಿನ ಶಕ್ತಿ ನೀಡುವುದಕ್ಕೂ
ಪ್ರೋಟೀನ್ ಸಹಕಾರಿ.
3. ಸಾಧ್ಯವಾದಷ್ಟು ಕಡಿಮೆ ಕಾರ್ಬೊಹೈಡ್ರೇಟ್ಸ್:
ಆಹಾರದಲ್ಲಿರುವ ಪೌಷ್ಟಿಕಾಂಶಗಳ ಪೈಕಿ ಡಯಾಬಿಟೀಸ್ ಇರುವವರು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಾರ್ಬೊಹೈಡ್ರೇಟ್ಸ್. ಇದನ್ನು ಸಂಕ್ಷಿಪ್ತವಾಗಿ “ಕಾರ್ಬ್ಸ್” ಎಂದೂ ಕರೆಯುತ್ತಾರೆ. ಜೀರ್ಣಕ್ರಿಯೆಯ ಸಂದರ್ಭದಲ್ಲಿ ಗ್ಲೂಕೋಸ್ ಆಗಿ ಪರಿವರ್ತನೆಯಾಗುವುದು ಇದೇ ಕಾರ್ಬೊಹೈಡ್ರೇಟ್ಸ್. ಸಾಮಾನ್ಯವಾಗಿ ಎಲ್ಲ ಪದಾರ್ಥಗಳ ನ್ಯೂಟ್ರಿಷನಲ್ ವ್ಯಾಲ್ಯೂ ಪಟ್ಟಿಯಲ್ಲಿ ಕಾರ್ಬೊಹೈಡ್ರೇಟ್ಸ್ ನೀಡಲಾಗಿರುತ್ತದೆ. ಇದು ಕಡಿಮೆ ಇರುವ ಆಹಾರಗಳು ಮಧುಮೇಹಿಗಳಿಗೆ ಹೆಚ್ಚು ಸುರಕ್ಷಿತ.
4. ಸಕ್ಕರೆ ಬಳಕೆಯನ್ನು ಸಂಪೂರ್ಣ ತ್ಯಜಿಸಿ:
ಮನುಷ್ಯನ ಆಹಾರ ಪದ್ಧತಿಯಲ್ಲಿ ಸಕ್ಕರೆ ಅನಿವಾರ್ಯವಲ್ಲ. ಸಕ್ಕರೆಯನ್ನು ಸಂಪೂರ್ಣ ತ್ಯಜಿಸಿಯೂ ಆರಾಮಾಗಿ ಬದುಕಬಹುದು. ಡಯಾಬಿಟೀಸ್ ಲಕ್ಷಣಗಳು ಕಂಡುಬಂದಾಗ ಮೊದಲು ತ್ಯಜಿಸಬೇಕಾದ ಆಹಾರವೇ ಸಕ್ಕರೆ. ಡಯಾಬಿಟೀಸ್ ಇಲ್ಲದವರು ಕೂಡ ಸಕ್ಕರೆ ಬಳಕೆಯನ್ನು ಬಿಡುವುದು ಆರೋಗ್ಯಕ್ಕೆ ಒಳ್ಳೆಯದು. ಕಾಫಿ, ಟೀ ಅಷ್ಟೇ ಅಲ್ಲ, ಯಾವುದೇ ಪದಾರ್ಥಕ್ಕೆ ಸಕ್ಕರೆ ಸೇರಿಸಬಾರದು. ಮದುವೆ ಮತ್ತಿತರ ಸಮಾರಂಭಗಳಿಗೆ ಹೋದಾಗ ರುಚಿ ನೋಡುವುದಕ್ಕೂ ಸಿಹಿ ಪದಾರ್ಥಗಳನ್ನು ಸೇವಿಸದಷ್ಟು ನಾಲಿಗೆ ಮೇಲೆ ನಿಯಂತ್ರಣ ಹೊಂದಬೇಕು.
5. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ:
ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಅತ್ಯಂತ ಮುಖ್ಯವಾದದ್ದು. ಆಹಾರವನ್ನು ತಡವಾಗಿ ಸೇವಿಸುವುದು ಅಥವಾ ಸೇವಿಸದಿರುವುದು ಅಪಾಯಕಾರಿ. ಯಾರಿಗೆ ಹೈ-ಶುಗರ್ ಸಮಸ್ಯೆ ಇರುತ್ತದೆಯೋ, ಅವರಿಗೆ ಲೋ-ಶುಗರ್ ಸಮಸ್ಯೆ ಬರುವ ಸಾಧ್ಯತೆ ಜಾಸ್ತಿಯಿರುತ್ತದೆ. ಹೈ-ಶುಗರ್ ಸಮಸ್ಯೆಗಿಂತ ಲೋ-ಶುಗರ್ ಸಮಸ್ಯೆ ಮತ್ತಷ್ಟು ಅಪಾಯಕಾರಿ. ಆದ್ದರಿಂದ ಪ್ರತಿ ದಿನವೂ, ಪ್ರತಿ ಹೊತ್ತೂ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಎಲ್ಲ ರೀತಿಯಲ್ಲೂ ಒಳ್ಳೆಯದು.
6. ಹೆಚ್ಚು
ನೀರು ಕುಡಿಯಬೇಕು:
ಡಯಾಬಿಟೀಸ್
ಇರುವವರಿಗೆ ಪದೇಪದೇ ಮೂತ್ರ ವಿಸರ್ಜನೆಯಾಗುವ ಸಾಧ್ಯತೆ ಜಾಸ್ತಿ. ಇದರಿಂದ ದೇಹಕ್ಕೆ ನೀರಿನ ನಷ್ಟ ಉಂಟಾಗುವುದರಿಂದ,
ಡಯಾಬಿಟೀಸ್ ಇರುವವರು ಹೆಚ್ಚಿನ ನೀರು ಕುಡಿಯಬೇಕಾಗುತ್ತದೆ. ಅಗತ್ಯವಿರುವಷ್ಟು ನೀರು ಕುಡಿಯದೇ ಡೀಹೈಡ್ರೇಷನ್
ಉಂಟಾದರೆ, ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾಗುವ ಅಪಾಯವಿರುತ್ತದೆ. ಗ್ಲೂಕೋಸ್ ಅಂಶವನ್ನು ಮೂತ್ರದ
ಮೂಲಕ ಹೊರಹಾಕಲು ಕೂಡ ಹೆಚ್ಚು ನೀರು ಕುಡಿಯುವುದು ಸಹಕಾರಿ. ಪ್ರತಿದಿನ ಎಷ್ಟು ನೀರು ಕುಡಿಯಬೇಕೆಂದು
ವೈದ್ಯರೊಂದಿಗೆ ಚರ್ಚಿಸಿ, ಅವರು ಹೇಳಿದಷ್ಟು ನೀರನ್ನು ಪ್ರತಿದಿನ ತಪ್ಪದೇ ಕುಡಿಯಬೇಕು.
7. ಕರಗಲೇಬೇಕು ಹೊಟ್ಟೆಯ ಬೊಜ್ಜು:
ದೇಹದಲ್ಲಿ ಅತಿಯಾಗಿ ಬೊಜ್ಜಿದ್ದರೆ ಇನ್ಸುಲಿನ್ ಸೆನ್ಸಿಟಿವಿಟಿ
ಕಡಿಮೆಯಾಗಿ, ಡಯಾಬಿಟೀಸ್ ಹೆಚ್ಚಾಗುತ್ತದೆ. ಅದರಲ್ಲೂ ಹೊಟ್ಟೆಯ ಬೊಜ್ಜು ಮತ್ತಷ್ಟು ಅಪಾಯಕಾರಿ. ಆದ್ದರಿಂದ
ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ಬದಲಾಯಿಸಿಕೊಂಡು, ಸೂಕ್ತ ವ್ಯಾಯಾಮಗಳನ್ನು ಮಾಡುವ ಮೂಲಕ ಬೊಜ್ಜನ್ನು
ಕರಗಿಸಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಅತಿಯಾದ ಬೊಜ್ಜನ್ನು ಕರಗಿಸಿಕೊಳ್ಳುವುದರಿಂದ ಸಕ್ಕರೆ
ಕಾಯಿಲೆಯ ನಿಯಂತ್ರಣ ಮಾತ್ರವಲ್ಲದೇ, ಒಟ್ಟಾರೆ ಆರೋಗ್ಯದಲ್ಲಿ ಕೂಡ ಸಾಕಷ್ಟು ಸುಧಾರಣೆಯಾಗುವುದು ಅನೇಕ
ಸಂಶೋಧನೆಗಳಲ್ಲಿ ದೃಢಪಟ್ಟಿದೆ.
8. ಇನ್ಸುಲಿನ್
ಸೆನ್ಸಿಟಿವಿಟಿ ಹೆಚ್ಚಿಸಿಕೊಳ್ಳಿ:
ಹಾಗಾದರೆ ಡಯಾಬಿಟೀಸ್ ಇರುವವರು ಯಾವ ಆಹಾರಗಳನ್ನು ಸೇವಿಸಬಹುದು, ಯಾವುದನ್ನು ಸೇವಿಸಬಾರದು, ಯಾವ್ಯಾವ ಆಹಾರಗಳು ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಗಣನೀಯವಾಗಿ ಹೆಚ್ಚಿಸಲಿವೆ – ಮುಂತಾದ ವಿಷಯಗಳ ಕುರಿತು ವೈಜ್ಞಾನಿಕವಾಗಿ ಸಾಬೀತಾದ ನಿಖರ ಮಾಹಿತಿಗಳನ್ನು ಮುಂದಿನ ಲೇಖನಗಳಲ್ಲಿ ತಿಳಿಯೋಣ.
