ಎಲ್ಲ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಾರೆ. ಆದರೆ ಕೆಲವರು ಮಾತ್ರ ಅತ್ಯುತ್ತಮ ಅಂಕಗಳನ್ನು ಗಳಿಸುತ್ತಾರೆ. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಪಾಠ ಮಾಡಿದರೂ, ಎಲ್ಲ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ಒಂದೇ ರೀತಿಯಿದ್ದರೂ, ಫಲಿತಾಂಶ ಮಾತ್ರ ಬೇರೆಬೇರೆ! ಕೆಲವರು 100ಕ್ಕೆ 100 ಅಂಕ ಪಡೆದಿದ್ದರೆ, ಮತ್ತೆ ಕೆಲವರು ಕಡಿಮೆ ಅಂಕ, ಇನ್ನು ಕೆಲವರು ಫೇಲ್ ಆಗಿರುತ್ತಾರೆ. ಇದಕ್ಕೆ ಕಾರಣವೇನು ಹಾಗೂ ಹೆಚ್ಚು ಅಂಕ ಪಡೆಯಲು ವಿದ್ಯಾರ್ಥಿಗಳು ಏನು ಮಾಡಬೇಕು ಎಂದು ಶಿಕ್ಷಣತಜ್ಞರು, ಪೋಷಕರು ಹಾಗೂ ಸಾಧಕ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದಾಗ ಹತ್ತುಹಲವು ಮಹತ್ವದ ವಿಷಯಗಳು ದೊರೆತವು.
1. ಕಲಿಕೆಗೆ ವಿಶೇಷ ಆದ್ಯತೆ:
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಮೊಟ್ಟಮೊದಲು ತೆಗೆದುಕೊಳ್ಳಬೇಕಾದ ನಿರ್ಧಾರವೆಂದರೆ, ಬೇರೆಲ್ಲಕ್ಕಿಂತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಟ, ಮನರಂಜನೆ ಮುಂತಾದವುಗಳಿಗಿಂತ ಪಾಠಗಳನ್ನು ಕಲಿಯುವುದೇ ಮುಖ್ಯವಾಗಿರಬೇಕು. ಹೆಚ್ಚು ಅಂಕ ಪಡೆಯುವುದಕ್ಕಾಗಿ ಬೇರೆ ಕೆಲವು ವಿಷಯಗಳನ್ನು ಸ್ವಲ್ಪ ಮಟ್ಟಿಗಾದರೂ ತ್ಯಾಗ ಮಾಡಲು ಸಿದ್ಧವಿರಬೇಕು. ಆಗ ಮಾತ್ರ ಉತ್ತಮ ಅಂಕ ಗಳಿಸುವ ಸಾಧ್ಯತೆ ಹೆಚ್ಚಾಗುತ್ತದೆ.
2. ಪೂರ್ತಿ ಪಠ್ಯಕ್ರಮದ ಅಧ್ಯಯನ:
ಪರೀಕ್ಷೆಗೆ ಓದಲು ಶುರು ಮಾಡುವ ಮೊದಲು ಎಲ್ಲ ವಿಷಯಗಳ ಸಂಪೂರ್ಣ ಪಠ್ಯಕ್ರಮ ಅಥವಾ ಸಿಲಬಸ್ ತಿಳಿದುಕೊಳ್ಳಬೇಕು. ಯಾವ್ಯಾವ ಪಾಠಗಳಿವೆ ಹಾಗೂ ಅವುಗಳಲ್ಲಿ ಯಾವ್ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದು ಸ್ಪಷ್ಟವಾಗಿದ್ದರೆ, ಹೇಗೆ ಓದಬೇಕು ಎಂದು ಸರಿಯಾಗಿ ಯೋಜನೆ ರೂಪಿಸಿಕೊಳ್ಳಬಹುದು. ಎಲ್ಲ ಪಾಠಗಳಿಗೂ ಆದ್ಯತೆ ನೀಡಿ ಅಧ್ಯಯನ ಮಾಡಲು ಇದು ನೆರವಾಗುತ್ತದೆ. ಇಲ್ಲದಿದ್ದರೆ, ಮೊದಲ ಕೆಲವು ಪಾಠಗಳನ್ನೇ ಹೆಚ್ಚಾಗಿ ಓದುವುದು ಹಾಗೂ ನಂತರದ ಕೆಲವು ಪಾಠಗಳನ್ನು ಓದದಿರುವುದು ಆಗುತ್ತದೆ.
3. ಪರೀಕ್ಷೆ ದೂರದಲ್ಲಿದ್ದಾಗಲೂ ಓದಬೇಕು:
ಪರೀಕ್ಷೆ ಹತ್ತಿರ ಬಂದಾಗ ಮೇಲೆ ಮಾತ್ರ ಓದಲು ಶುರು ಮಾಡಿದರೆ ಮನಸ್ಸಿಗೆ ಒತ್ತಡ ಹೆಚ್ಚಾಗುತ್ತದೆ. ಆಗ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕೂಡ ಸಾಕಷ್ಟು ಸಮಯ ಇರುವುದಿಲ್ಲ. ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯವನ್ನು ಓದಿಗೆ ಮೀಸಲಿಡಬೇಕು. ಆ ದಿನ ಓದಿದ ವಿಷಯವನ್ನು ಅದೇ ದಿನ ಅಥವಾ ಮರುದಿನ ಮತ್ತೊಮ್ಮೆ ಓದಿದರೆ, ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ.
4. ಕಂಠಪಾಠಕ್ಕೂ ಮುನ್ನ ಅರ್ಥ ಮಾಡಿಕೊಳ್ಳಬೇಕು:
ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು ಕೆಲವೊಂದನ್ನು ಕಂಠಪಾಠ ಮಾಡಬೇಕಾಗುತ್ತದೆ. ಪದ್ಯಗಳನ್ನು ಮಾತ್ರವಲ್ಲದೇ, ಕೆಲವು ಗದ್ಯ ಭಾಗಗಳು ಹಾಗೂ ಉತ್ತರಗಳನ್ನು ಕಂಠಪಾಠ ಮಾಡಬೇಕಾಗುತ್ತದೆ. ಕಂಠಪಾಠ ಮಾಡುವುದರಿಂದ ಪರೀಕ್ಷೆಯಲ್ಲಿ ಯೋಚಿಸುವುದು ಕಡಿಮೆಯಾಗಿ, ಸಮಯ ಉಳಿಯುತ್ತದೆ. ಆದರೆ ವಿಷಯದ ಅರ್ಥ ತಿಳಿಯದೆ ಕೇವಲ ಕಂಠಪಾಠ ಮಾಡಿದರೆ, ಅದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ ಪ್ರತಿಯೊಂದು ವಿಷಯವನ್ನು ಸಂಪೂರ್ಣ ಅರ್ಥ ಮಾಡಿಕೊಂಡು, ನಂತರವಷ್ಟೇ ಕಂಠಪಾಠ ಮಾಡಬೇಕು. ಯಾವುದಾದರೂ ವಿಷಯದ ಅರ್ಥವಾಗದಿದ್ದರೆ ಶಿಕ್ಷಕರು ಅಥವಾ ವಿಶ್ವಾಸಾರ್ಹ ಪುಸ್ತಕಗಳು, ಅಂತರ್ಜಾಲದ ಸಹಾಯ ಪಡೆಯಬೇಕು. ಕಲಿತ ವಿಷಯವನ್ನು ಸರಳ ಪದಗಳಲ್ಲಿ ಮತ್ತೊಬ್ಬರಿಗೆ ವಿವರಿಸಲು ಸಾಧ್ಯವಾದರೆ, ಆ ವಿಷಯ ಚೆನ್ನಾಗಿ ಅರ್ಥವಾಗಿದೆ ಎಂದರ್ಥ.
5. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ಅಭ್ಯಾಸ:
ಹಿಂದಿನ ಹಲವು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ನೋಡಿದರೆ ಪರೀಕ್ಷೆಯ ಮಾದರಿ ಹೇಗಿರುತ್ತದೆ ಎಂಬುದು ಅರ್ಥವಾಗುತ್ತದೆ. ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಮತ್ತು ಯಾವ ವಿಷಯಗಳು ಮುಖ್ಯವಾಗಿವೆ ಎಂಬುದನ್ನೂ ಇದರಿಂದ ತಿಳಿದುಕೊಳ್ಳಬಹುದು. ಆದರೆ ಹಿಂದಿನ ವರ್ಷ ಬಂದ ಪ್ರಶ್ನೆಗಳೇ ಮತ್ತೆ ಬರುತ್ತವೆ ಎಂದು ಭಾವಿಸಬಾರದು. ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಭ್ಯಾಸ ಮಾಡಲು ಮಾತ್ರ ಅವುಗಳನ್ನು ಬಳಸಬೇಕು. ಸಾಧ್ಯವಾದರೆ ಪರೀಕ್ಷೆಯಂತೆಯೇ ಸಮಯ ನಿಗದಿಪಡಿಸಿಕೊಂಡು ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕು. ಇದರಿಂದ ವಿದ್ಯಾರ್ಥಿಯ ಬರವಣಿಗೆಯ ವೇಗ ಮತ್ತು ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕೌಶಲ್ಯವು ಕರಗತವಾಗುತ್ತದೆ. ಉತ್ತರ ಬರೆದ ನಂತರ ಮೌಲ್ಯಮಾಪನವನ್ನೂ ಮಾಡಿದರೆ, ಎಲ್ಲಿ ತಪ್ಪಾಗಿದೆ ಮತ್ತು ಸರಿಯಾದ ಉತ್ತರ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಬಹುದು.
6. ಆರೋಗ್ಯ ಸಂರಕ್ಷಣೆಗೆ ಆದ್ಯತೆ:
ಉತ್ತಮ ಅಂಕಗಳಿಗಾಗಿ ಓದುವುದು ಮುಖ್ಯ. ಆದರೆ ಆರೋಗ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಸಾಕಷ್ಟು ನಿದ್ರೆ ಮಾಡಿದರೆ ಗಮನವಿಟ್ಟು ಓದಲು, ಹೊಸ ವಿಷಯಗಳನ್ನು ಕಲಿಯಲು ಮತ್ತು ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಹಾಯವಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ಪ್ರತಿದಿನ ತಡರಾತ್ರಿವರೆಗೆ ಓದುವ ಬದಲು, ವರ್ಷವಿಡೀ ಸರಿಯಾದ ಸಮಯಕ್ಕೆ ಓದಿ ಮತ್ತು ಸಾಕಷ್ಟು ನಿದ್ರೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಊಟ ಮಾಡಿ, ಸಾಕಷ್ಟು ನೀರು ಕುಡಿದು ಮತ್ತು ಸ್ವಲ್ಪ ದೈಹಿಕ ಚಟುವಟಿಕೆ ಮಾಡಬೇಕು. ಇಲ್ಲದಿದ್ದರೆ ಆಗಾಗ ಅನಾರೋಗ್ಯ ಉಂಟಾಗಿ ಕಲಿಕೆಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಪರೀಕ್ಷೆ ಸಮಯದಲ್ಲಿ ಅಥವಾ ಪರೀಕ್ಷೆಗೆ ಕೆಲವು ದಿನಗಳು ಬಾಕಿ ಇರುವಾಗ ಅನಾರೋಗ್ಯ ಉಂಟಾದರೆ, ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕಲಿಕೆಗೆ ಕೊಡುವ ಆದ್ಯತೆಯನ್ನೇ ಆರೋಗ್ಯ ಕಾಪಾಡಿಕೊಳ್ಳಲೂ ಕೊಡಬೇಕು. ಇದಕ್ಕಾಗಿ ದೈಹಿಕ ಹಾಗೂ ಮಾನಸಿಕ ವೈದ್ಯರ ಸಲಹೆ ಪಡೆಯುವುದು ಕೂಡ ಒಳ್ಳೆಯ ನಿರ್ಧಾರ.